ಪ್ರಾಟ್, ಎಡ್ವಿನ್ ಜಾನ್
	1883-1964. ಕೆನಡದ ಕವಿ. ಹುಟ್ಟಿದ್ದು ನ್ಯೂಫೌಂಡ್‍ಲ್ಯಾಂಡಿನ ವೆಸ್ಟರ್ನ್‍ಬೇಯಲ್ಲಿ ಮೆತೊಡಿಸ್ಟ್ ಪಾದ್ರಿಯೊಬ್ಬನ ಮಗನಾದ ಈತನ ವಿದ್ಯಾಭ್ಯಾಸ ಸೇಂಟ್ ಜಾನ್ ಹೈಸ್ಕೂಲಿನಲ್ಲೂ ಅನಂತರ ಟೊರಾಂಟೋ ವಿಶ್ವವಿದ್ಯಾಲಯದಲ್ಲೂ ನಡೆಯಿತು. ಅದೇ ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ. ಪದವಿಯನ್ನೂ ಪಡೆದ. 1920ರಲ್ಲಿ ವಿಕ್ಟೋರಿಯಾ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕನಾಗಿ ಸೇರಿ ಅಲ್ಲಿಯೇ ಪ್ರಾಧ್ಯಾಪಕನೂ ಆಗಿ 1953ರಲ್ಲಿ ಆ ವೃತ್ತಿಯಿಂದ ನಿವೃತ್ತಿಗೊಂಡ. 1936ರಿಂದ 1943ರ ತನಕ ಕೆನಡಿಯನ್ ಪೊಯಟ್ರಿ ಮ್ಯಾಗಜೀನ್ ಪತ್ರಿಕೆಯ ಸಂಪಾದಕನಾಗಿಯೂ ದುಡಿದ. 1930ರಿಂದಲೂ ಈತ ಸದಸ್ಯನಾಗಿದ್ದ ಕೆನಡಾದ ರಾಯಲ್ ಸೊಸೈಟಿ 1941ರಲ್ಲಿ ಈತನಿಗೆ ಲಾರನ್ ಪಿಯರ್ಸ್ ಚಿನ್ನದ ಪದಕವನ್ನು ನೀಡಿ ಗೌರವಿಸಿತು. ಕೆನಡಾದ ಉತ್ಕøಷ್ಟ ಕವಿಗಳಲ್ಲಿ ಒಬ್ಬನಾದ ಈತ 40ನೆಯ ವರ್ಷದಲ್ಲೇ ಖ್ಯಾತಿಯ ಶಿಖರವನ್ನೇರಿದ್ದ. ನ್ಯೂಫೌಂಡ್‍ಲ್ಯಾಂಡ್ ವರ್ಸ್ (1923), ದಿ ವಿಚಸ್ ಬ್ರ್ಯೂ (1926), ದಿ ಐರನ್ ಡೋರ್ (1927), ವರ್ಸಸ್ ಆಫ್ ದಿ ಸೀ (1930), ಮೆನಿ ಮೂಡ್ಸ್ (1933), ದಿ ಲಾಸ್ ಆಫ್ ದಿ ಟಿಟ್ಯಾನಿಕ್ (1935), ದಿ ಫೇಬಲ್ ಆಫ್ ದಿ ಗೋಟ್ಸ್ ಅಂಡ್ ಅದರ್ ಪೊಯೆಮ್ಸ್ (1937), ಗವರ್ನರ್ ಜನರಲ್‍ನ ವಾರ್ಷಿಕ ಬಹುಮಾನ ಪಡೆದ ಕೃತಿ) ಡನ್‍ಕಿರ್ಕ್ (1941), ಸ್ಟಿಲ್ ಲೈಫ್ (1943), ದೆ ಆರ್ ರಿಟರ್ನಿಂಗ್ (1945), ಬಿಹೈಂಡ್ ದಿ ಲಾಗ್ (1947), ಟುವಡ್ರ್ಸ್ ದಿ ಲಾಸ್ಟ್ ಸ್ಟೈಕ್ (1952)-ಇವು ಈತನ ಅಗಾಧ ಕಾವ್ಯರಾಶಿಗಳಲ್ಲಿಯ ಕೆಲವು ಗ್ರಂಥಗಳು. ಅಲ್ಲಿನ ನಾಲ್ಕು ವಿಶ್ವವಿದ್ಯಾಲಯಗಳು ಈತನಿಗೆ ಗೌರವ ಪದವಿ ಪ್ರಶಸ್ತಿಗಳನ್ನು ನೀಡಿವೆ.
(ಎಚ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ